ಟೈಮ್ಸ್ ಆಫ್ ಇಂಡಿಯ, ದಿ
 
ಭಾರತದ ಒಂದು ಪ್ರಮುಖ ಇಂಗ್ಲಿಷ್ ದಿನಪತ್ರಿಕೆ. ಸ್ವಾತಂತ್ರ್ಯ ಪೂರ್ವದಲ್ಲಿ ಈ ಪತ್ರಿಕೆ ಇಂಗ್ಲಿಷರ ಒಡೆತನದಲ್ಲಿದ್ದರೂ ಭಾರತೀಯರ ಆಶೋತ್ತರಗಳನ್ನು, ಮುಖ್ಯವಾಗಿ ಭಾರತದಲ್ಲಿ ಆಗಬೇಕಾದ ಸುಧಾರಣೆಗಳನ್ನು ತುಂಬ ಚೆನ್ನಾಗಿ ಶ್ರುತಪಡಿಸುತ್ತಿತ್ತು. ಜೊತೆಗೆ ಆಳರಸರ ಧ್ಯೇಯ-ಧೋರಣೆಗಳನ್ನೂ ನಿರೂಪಿಸುತ್ತಿತ್ತು. ಹೀಗೆ ಇಬ್ಬಣಗಳ ನಡುವಿನ ಒಂದು ಸೇತುವೆಯಂತೆ ಇದು ಕೆಲಸಮಾಡುತ್ತಿತ್ತು. ಈ ಪತ್ರಿಕೆ ದೇಶ-ವಿದೇಶಗಳ ಸಮಾಚಾರವನ್ನು ವಿಶಿಷ್ಟವಾದ ದೃಷ್ಟಿಕೋನದಿಂದ ಸಾದರಪಡಿಸುತ್ತ ಬಂದಿದೆ. ಇದರ ಧ್ಯೇಯೋದ್ದೇಶಗಳು ಸ್ವತಂತ್ರ ಮತ್ತು ಉದಾರ. ಸುದ್ದಿಯೊಂದಿಗೆ ಇದು ಸ್ಫುಟಲೇಖನಗಳನ್ನು, ಅಗ್ರಲೇಖನಗಳನ್ನು ಬರೆದು ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುತ್ತ ಬಂದಿದೆ. ವಿಶ್ವದ 20 ಪ್ರಮುಖ ಪತ್ರಿಕೆಗಳಲ್ಲಿ ಇದು ಒಂದೆಂದು ಪರಿಗಣಿತವಾಗಿದೆ.

	1838ರಲ್ಲಿ ಭಾರತಕ್ಕೆ ಆಗಮಿಸಿದ ನಿವೃತ್ತ ಐರಿಷ್ ಡಾಕ್ಟರ್ ಬ್ರೆನನ್ ಮುಂಬಯಿಯಲ್ಲಿ ದ್ವಿಸಾಪ್ತಾಹಿಕ ಪತ್ರಿಕೆಯಾಗಿ ದಿ ಬಾಂಬೆ ಟೈಮ್ಸ್ ಅಂಡ್ ಜರ್ನಲ್ ಆಫ್ ಕಾಮರ್ಸ್ ಪ್ರಾರಂಭಿಸಿದ. ರಾಜಕಾರಣ, ವಿಜ್ಞಾನ ಹಾಗೂ ಸಾಹಿತ್ಯದ ಪರಿಚಯ ಮಾಡಿಕೊಡುವುದೇ ಪತ್ರಿಕೆಯ ಉದ್ದೇಶವೆಂದು ಮೊದಲ ಸಂಚಿಕೆಯಲ್ಲಿ ತಿಳಿಸಲಾಗಿತ್ತು. 13 ವರ್ಷಗಳ ಅನಂತರ ದಿ ಬಾಂಬೆ ಟೈಮ್ಸ್ ದಿನಪತ್ರಿಕೆಯಾಯಿತು. ಅದರೊಂದಿಗೆ ಸ್ಪರ್ಧಿಸುತ್ತಿದ್ದ ದಿ ಬಾಂಬೆ ಸ್ಟ್ಯಾಂಡರ್ಡ್ ಪತ್ರಿಕೆ 1856ರಲ್ಲೂ ದಿ ಟಿಲಿಗ್ರಾಫ್ ಅಂಡ್ ಕೊರಿಯರ್ 1861ರಲ್ಲೂ ಇದರಲ್ಲಿ ಸೇರಿಕೊಂಡವು. ಈ ಪತ್ರಿಕೆ ದಿ ಟೈಮ್ಸ್ ಆಫ್ ಇಂಡಿಯ ಎಂಬ ಹೆಸರು ಪಡೆದದ್ದು 1861ರಲ್ಲಿ. ಕಾಲಸ್ಥಿತಿಗೆ ಅನುಗುಣವಾಗಿ ಈ ಮಾರ್ಪಾಡು ಮಾಡಲಾಗಿರುವುದಾಗಿ ಅದರ ಮೊದಲ ಸಂಚಿಕೆಯಲ್ಲಿ ತಿಳಿಸಲಾಯಿತು. 1890ರಲ್ಲಿ ಥಾಮಸ್ ಜೆವಲ್ ಬೆನೆಟ್ ಇದರ ಸಂಪಾದಕನಾದ. ಈತ ಲಂಡನಿನ ಪ್ರಸಿದ್ಧ ಮುದ್ರಕ ಎಫ್. ಎಂ. ಕೋಲ್‍ಮನ್ನನನ್ನು ಇಲ್ಲಿಗೆ ಬರಮಾಡಿಕೊಂಡ, ಇಬ್ಬರೂ ಸೇರಿ ಬೆನೆಟ್, ಕೋಲ್‍ಮನ್ ಮತ್ತು ಕಂಪನಿ ಸ್ಥಾಪಿಸಿ ಈ ಪತ್ರಿಕೆಯ ಒಡೆಯರಾದರು. ಸಾಪ್ತಾಹಿಕ ಆವೃತ್ತಿ 1879ರಲ್ಲಿ ಪ್ರಾರಂಭವಾಯಿತು. ಇದರ ಬಳಗ ಬೆಳೆದಂತೆ ಕಚೇರಿಗೆ ಹೆಚ್ಚು ಸ್ಥಳ ಬೇಕೆನಿಸಿತು. ಫ್ಲೋರ ಫೌಂಟನ್ ಮತ್ತು ಪಾರ್ಸಿ ಬಜಾóರ್‍ಗಳಲ್ಲಿ ಇದರ ಕಚೇರಿಗಳನ್ನು ಏರ್ಪಡಿಸಲಾಯಿತು. ಇವೂ ಸಾಲದೆ ಹೋಗಿ 1902ರಲ್ಲಿ ಪತ್ರಿಕೆಯ ಈಗಿನ ಸ್ಥಳಕ್ಕೆ ಬದಲಾಯಿಸಲಾಯಿತು. ಸದ್ಯದ ಕಟ್ಟಡ ಭವ್ಯವಾದ್ದು; 72,000 ಚ.ಅ. ವಿಸ್ತಾರವಾದ್ದು. 1946ರಲ್ಲಿ ರಾಮಕೃಷ್ಣ ದಾಲ್ಮಿಯ ಈ ಕಂಪನಿಯ ಅಧಿಕ ಷೇರುಗಳನ್ನು ಕೊಂಡರು. ಪತ್ರಿಕೆಯ ಒಡೆತನದೊಂದಿಗೆ ಧೋರಣೆಯೂ ಬದಲಾಯಿತು. ಸಂಪೂರ್ಣವಾಗಿ ರಾಷ್ಟ್ರೀಯ ಧೋರಣೆ ಪಾಲಿಸುವವರು ಸಂಪಾದಕರಾಗಿ ಬಂದರು. ಸ್ವಾತಂತ್ರ್ಯಾನಂತರ ಇದು ಭಾರತೀಯರ ಆಶೋತ್ತರಗಳನ್ನು ಪ್ರಮುಖವಾಗಿ ಗಮನಿಸತೊಡಗಿತು. ಮುಂದೆ ಸರ್ಕಾರ ಪ್ರವೇಶಿಸಿ ಹೊಸ ಆಡಳಿತ ಮಂಡಳಿಯನ್ನು ನೇಮಿಸಿತು.

	ಈ ಪತ್ರಿಕೆಯ ಮುಂಬಯಿ, ದಿಲ್ಲಿ, ಅಹಮದಾಬಾದ್, ಲಕ್ನೋ, ಪಾಟ್ನ, ಹೈದರಾಬಾದ್, ಕೊಲ್ಕತ್ತಾ, ಪುಣೆ ಮತ್ತು ಬೆಂಗಳೂರುಗಳಿಂದ ಏಕಕಾಲಕ್ಕೆ ಪ್ರಕಟವಾಗುತ್ತಿದೆ. ಬೆಂಗಳೂರಿನ ಸ್ಥಾನೀಯ ಸಂಪಾದಕರು ಎಚ್ ಎಸ್ ಬಲರಾಮ್ ಸಿಂಗ್. ಈಗಿನ ಪ್ರಧಾನ ಸಂಪಾದಕರು ಜೈದೀಪ್ ಬೋಸ್.			   				(ಎಸ್.ವಿ.ಪಿ.ಎ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ